Wednesday 13 July 2016

ಕೃಷಿ ತಂತ್ರಜ್ಞಾನಗಳ ಬಗ್ಗೆ 10 ಸಾವಿರ ರೈತರಿಗೆ ತರಬೇತಿ


ಬೆಂಗಳೂರು: ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸಕ್ತ ವರ್ಷ 10,300 ರೈತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಸನಗೌಡ ಆರ್‌. ಪಾಟೀಲ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದಾರೆ.ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಇಲಾಖೆಯಿಂದ ತರಬೇತಿ, ಪ್ರವಾಸ, ಕೃಷಿ ಅಭಿಯಾನ, ಪ್ರಾತ್ಯಕ್ಷಿಕೆಗಳು, ಕೃಷಿ ಮೇಳ ಮುಖಾಂತರ ರೈತರಿಗೆ ಮಾಹಿತಿ ತಲುಪಿಸಲಾಗುತ್ತದೆ. ಭೂ ಸಮೃದ್ಧಿ ಯೋಜನೆಯಡಿ ಕಳೆದ
ಮೂರು ವರ್ಷಗಳಲ್ಲಿ 7,441 ರೈತರಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಿಂದ ಈ ವರ್ಷ 12,810 ರೈತ/ರೈತ ಮಹಿಳೆಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಕೃಷಿ ಯಂತ್ರೋಪಕರಣಗಳಿಗೆ 1,66,922 ಹಾಗೂ ಟಾರ್ಪಲಿನ್ಸ್‌ಗಳಿಗೆ 3,73,986 ಮತ್ತು ಕೃಷಿ ಘಟಕಗಳಿಗೆ 4,052 ರೈತರಿಂದ ಅರ್ಜಿ ಸಲ್ಲಿಕೆಯಾಗಿವೆ. ಅನುದಾನ ಲಭ್ಯತೆ ಆಧರಿಸಿ ಉಪಕರಣಗಳನ್ನು ಪೂರೈಕೆ ಮಾಡಲಾಗುವುದು ಎಂದಿದ್ದಾರೆ. ಕೃಷಿ ಯಂತ್ರೋಪಕರಣಗಳ ಪೂರೈಕೆಗಾಗಿ 2015–16ನೇ ಸಾಲಿನಲ್ಲಿ ₹ 359.60 ಕೋಟಿ ನಿಗದಿ ಮಾಡಲಾಗಿತ್ತು. ಪ್ರಸಕ್ತ ವರ್ಷ ಅದನ್ನು ₹432.43 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

‘ಗಂಡಸುತನ ಇದ್ರೆ  ಇಲಾಖೆ ಸುಧಾರಣೆ ಮಾಡಿ ತೋರಿಸ್ರಿ’
ಬೆಂಗಳೂರು: ಇದು ಕೃಷ್ಣ ಬೈರೇಗೌಡ ವಿರೋಧ ಪಕ್ಷದ ಸದಸ್ಯರಿಗೆ ಎಸೆದ ಸವಾಲು. ಸಚಿವ ಸ್ಥಾನದ ಸಂಕಷ್ಟ ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯ ಗಣೇಶ್‌ ಕಾರ್ಣಿಕ್‌, ‘ಕೃಷ್ಣ ಬೈರೇಗೌಡರು ಅಸಹಾಯಕರಾಗಿದ್ದು, ತೀವ್ರ ಒತ್ತಡದಲ್ಲಿದ್ದಾರೆ. ಅವರು ಏನಾದರೂ ಮಾಡಿಕೊಂಡರೆ ಕಷ್ಟ’ ಎಂದು ಕಾರ್ಣಿಕ್‌ ಕೆಣಕಿದ್ದರಿಂದ ಸಿಟ್ಟಿಗೆದ್ದ ಕೃಷ್ಣ ಬೈರೇಗೌಡ ಹೀಗೆ ಎದಿರೇಟು ನೀಡಿದರು.

ಮಧ್ಯ ಪ್ರವೇಶಿಸಿದ ಸಭಾನಾಯಕ ಡಾ. ಜಿ. ಪರಮೇಶ್ವರ್‌, ‘ತಮ್ಮ ಆತಂಕವನ್ನು ಹೇಳಿದ ಗೌಡರು, ಎಲ್ಲಾ ಸದಸ್ಯರ ಸಹಕಾರ ಕೋರಿದ್ದಾರೆ. ಕಾರ್ಣಿಕ್‌ರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.



No comments:

Post a Comment