Wednesday 13 July 2016

ಮಹದಾಯಿ ಜಲವಿವಾದ ಜು.14ಕ್ಕೆ ವಿಚಾರಣೆ



ನವದೆಹಲಿ: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಒಂದು ವಾರ ಮುಂದೂಡಬೇಕು ಎಂಬ ಗೋವಾ ಬೇಡಿಕೆಗೆ ನ್ಯಾಯಾಧಿಕರಣದ ನ್ಯಾ. ಜೆ.ಎಸ್. ಪಾಂಚಾಲ್ ನೇತೃತ್ವದ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ವಿಚಾರಣೆ ಮುಂದೂಡಲೇ ಇಲ್ಲಿ ಕುಳಿತಿದ್ದೇವೆ ಎಂದು ನೀವು ಭಾವಿಸಿದಂತಿದೆ ಎಂದು ಕಟುವಾಗಿ
ಟೀಕಿಸಿದೆ.

ಮಹದಾಯಿ ನದಿಯಿಂದ ಏತ ನೀರಾವರಿ ಮೂಲಕ ಮಲಪ್ರಭಾ ನದಿಗೆ 7 ಟಿಎಂಸಿ ನೀರು ಹರಿಸುವ ತಾತ್ಕಾಲಿಕ ಯೋಜನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ನೀಡಿದ್ದ ಪ್ರತ್ಯುತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ನಮಗೆ 1 ವಾರದ ಕಾಲವಕಾಶ ಬೇಕು ಎಂದು ಗೋವಾ ಕೇಳಿಕೊಂಡಿತು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ನೀವು ಈಗಾಗಲೇ ಆಕ್ಷೇಪಣೆಗಳನ್ನು ಸಲ್ಲಿಸಿದ್ದೀರಿ. ಈಗ ವಿಚಾರಣೆ ನಡೆಸೋಣ ಎಂದು ಪ್ರತಿಕ್ರಿಯಿಸಿತು. ಆದರೆ, ಮುಂದೂಡಿಕೆಗೆ ಗೋವಾ ಪಟ್ಟು ಹಿಡಿದದ್ದರಿಂದ ಜುಲೈ 14ಕ್ಕೆ ವಿಚಾರಣೆ ದಿನಾಂಕವನ್ನು ನ್ಯಾಯಪೀಠ ನಿಗದಿಪಡಿಸಿತು.

ಕೊಂಕಣ ಸುತ್ತಿ ಮೈಲಾರಕ್ಕೆ?: ನಮಗೆ ಹೊಸ ದಾಖಲೆ, ಮಾಹಿತಿ ಲಭ್ಯವಾಗಿದೆ. ಇದನ್ನು ಪ್ರಸ್ತುತಪಡಿಸಲು ಕಾಲಾವಕಾಶ ಬೇಕು ಎಂಬ ವಾದ ನ್ಯಾಯಪೀಠಕ್ಕೆ ತೃಪ್ತಿ ತರಲಿಲ್ಲ. ಇದೇ ವೇಳೆ ಗೋವಾ ವಕೀಲ ದತ್ತ ಪ್ರಸಾದ್ ಕಾಲೆಳೆದ ರಾಜ್ಯದ ವಕೀಲ ಫಾಲಿ ನಾರಿಮನ್, ನೀವು ಕೊಂಕಣ ಸುತ್ತಿ ಮೈಲಾರಕ್ಕೆ ಏಕೆ ಬರುತ್ತೀರಿ? ನಿಮ್ಮ ಹಿರಿಯ ವಕೀಲ ಜ್ಯೋತಿ ಪ್ರಕಾಶ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಬೇಕು ಎಂದು

ನೇರವಾಗಿಯೇ ಹೇಳಬಹುದಲ್ಲವೇ ಎಂದರು. ನಾರಿಮನ್ ಮಾತಿಗೆ ದನಿಗೂಡಿಸಿದ ನ್ಯಾ.ಜೆ.ಎಸ್. ಪಾಂಚಾಲ್, ಹಿರಿಯ ವಕೀಲರು ಬಾರದಿರುವುದೇ ಕಾರಣ ಎಂಬುದು ನಮಗೆ ಗೊತ್ತಿದೆ. ಮುಂದಿನ ವಿಚಾರಣೆಯಲ್ಲಿ ಇದನ್ನು ಪುನಾವರ್ತಿಸಬೇಡಿ ಎಂದು ಗೋವಾಕ್ಕೆ ಕಿವಿಮಾತು ಹೇಳಿದರು.

ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ವಿಚಾರಣೆ ಮುಂದೂಡುವುದೇ ನಮ್ಮ ಕೆಲಸವಲ್ಲ. ವಿಚಾರಣೆ ದಿನಾಂಕವನ್ನು ಕೆಲ ತಿಂಗಳುಗಳ ಹಿಂದೆಯೇ ನಿಗದಿ ಮಾಡಿದ್ದೆವು. ಈಗ ನೀವು ಮತ್ತೆ ಸಮಯಾವಕಾಶ ಕೇಳುತ್ತಿದ್ದೀರಿ. ನಿಮಗೆ 1 ದಿನದ ಅವಕಾಶ ನೀಡುತ್ತಿದ್ದೇವೆ. ನಾಳೆಯೇ ನಿಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿ, ಜುಲೈ 14ರಂದು ವಿಚಾರಣೆಗೆ ತಯಾರಾಗಿ ಬನ್ನಿ ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಿತು.






No comments:

Post a Comment