Wednesday 13 July 2016

ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ, ಸಂವಿಧಾನ ಪೀಠಕ್ಕೆ


ನವದೆಹಲಿ: ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ (ನ್ಯಾಷನಲ್ ಕೋರ್ಟ್ ಆಫ್ ಅಪೀಲ್) ಸ್ಥಾಪನೆ ಸಂಬಂಧ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ಸಂವಿಧಾನ ಪೀಠಕ್ಕೆ ಒಪ್ಪಿಸಿತು.ಪ್ರಮುಖ ನಗರಗಳ ಪ್ರಾದೇಶಿಕ ಪೀಠಗಳ ಜೊತೆಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸಲು ಕೋರಿದ ಮನವಿಯನ್ನು ಕೇಂದ್ರ ಸರ್ಕಾರವು ಪ್ರಬಲವಾಗಿ ವಿರೋಧಿಸಿತ್ತು. ‘ಇದು ಫಲರಹಿತ ಪ್ರಯತ್ನ’, ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 2 ಕೋಟಿ ಪ್ರಕರಣಗಳ
ಹೊರೆಯನ್ನು ಇದು ತಗ್ಗಿಸುವುದಿಲ್ಲ ಎಂದು ಕೇಂದ್ರ ಪ್ರತಿಪಾದಿಸಿತ್ತು.

‘ಕೆಳಹಂತದಲ್ಲಿ ನ್ಯಾಯ ಒದಗಿಸಲು ವ್ಯವಸ್ಥೆಯಾಗಬೇಕು. ಸುಪ್ರೀಂಕೋರ್ಟಿನಲ್ಲಿ ಬಾಕಿ ಉಳಿದಿರುವ 50,000 ಪ್ರಕರಣಗಳಿಗೆ ಹೋಲಿಸಿದರೆ ಕೆಳಗಿನ ನ್ಯಾಯಾಲಯಗಳಲ್ಲಿ 2 ಕೋಟಿ ಖಟ್ಲೆಗಳು ಬಾಕಿ ಬಿದ್ದಿವೆ. ಹೀಗಿರುವಾಗ ಮೇಲ್ಮನವಿ ನ್ಯಾಯಾಲಯ ಏನು ಮಾಡಲು ಸಾಧ್ಯ?’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠದ ಮುಂದೆ ವಾದಿಸುತ್ತಾ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಪ್ರತಿಪಾದಿಸಿದ್ದರು.

‘ನಾವು ಕೇವಲ ವಕೀಲರ ಕಿಸೆ ತುಂಬಿಸುತ್ತೇವೆ ಅಷ್ಟೆ, ಸುಪ್ರೀಂಕೋರ್ಟ್ ಇದನ್ನು ಪರಿಗಣಿಸಬಾರದು’ ಎಂದು ನ್ಯಾಯಮೂರ್ತಿ ಆರ್. ಭಾನುಮತಿ ಮತ್ತು ನ್ಯಾಯಮೂರ್ತಿ ಯು.ಯು. ಲಲಿತ್ ಅವರೂ ಸದಸ್ಯರಾಗಿರುವ ಪೀಠಕ್ಕೆ ರೋಹ್ಟಗಿ ಮನವಿ ಮಾಡಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಹಾಯಕರಾಗಿ ನೇಮಕಗೊಂಡಿದ್ದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರ ಸಲಹೆಗಳನ್ನು ಪರಿಶೀಲಿಸುವಂತೆ ಸೂಚಿಸಿದ ಪೀಠ ವಿಷಯದ ಬಗ್ಗೆ ನಿರ್ದೇಶನ ನೀಡುವ ಅಥವಾ ಶಿಫಾರಸು ಮಾಡುವ ಅಧಿಕಾರ ಇದೆಯೇ ಎಂಬ ಬಗ್ಗೆ ನಾವು ಪರಿಶೀಲಿಸಲು ನಾವು ವಿಷಯವನ್ನು ವಿಶಾಲ ಪೀಠಕ್ಕೆ ವಹಿಸುತ್ತೇವೆ ಎಂದು ಪೀಠ ಕಳೆದ ಏಪ್ರಿಲ್​ನಲ್ಲಿ ಹೇಳಿತ್ತು. ಇದಕ್ಕೂ ಮುನ್ನ ವಿಷಯವನ್ನು ಪಂಚಸದಸ್ಯ ಸಂವಿಧಾನ ಪೀಠಕ್ಕೆ ಒಪ್ಪಿಸುವುದಾಗಿಯೂ ಪೀಠ ಹೇಳಿತ್ತು. ಚೆನ್ನೈ, ಮುಂಬೈ ಮತ್ತು ಕೋಲ್ಕತದಲ್ಲಿ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ ತನ್ನ ಅರ್ಜಿಯನ್ನು ತಿರಸ್ಕರಿಸಿದ ಕೇಂದ್ರದ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಪುದುಚೆರಿ ಮೂಲದ ವಕೀಲ ವಿ. ವಸಂತ ಕುಮಾರ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು

No comments:

Post a Comment