Wednesday 13 July 2016

ಬ್ರಿಟನ್​ನಲ್ಲಿ ಇಂದಿನಿಂದ ಐರನ್ ಲೇಡಿ ತೆರೇಸಾ ಮೇ ಶಕೆ ಆರಂಭ


ಮೇಡನ್​ಹೆಡ್​ನ ಸಂಸದೆ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ | 26 ವರ್ಷಗಳ ಬಳಿಕ ಮಹಿಳೆಗೆ ಪ್ರಧಾನಮಂತ್ರಿ ಪಟ್ಟ
ಲಂಡನ್: ಬ್ರಿಟನ್​ನ ನೂತನ ಪ್ರಧಾನಿಯಾಗಿ ಕನ್ಸರ್ವೆಟಿವ್ ಪಕ್ಷದ ತೆರೇಸಾ ಮೇ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 26 ವರ್ಷಗಳ ಬಳಿಕ ಮಹಿಳೆಯ ಕೈಗೆ ದೇಶದ ಆಡಳಿತಸೂತ್ರ ಸಿಕ್ಕಂತಾಗಲಿದೆ. ಮಾರ್ಗರೇಟ್ ಥ್ಯಾಚರ್ ಬಳಿಕ ಪ್ರಧಾನಿ ಹುದ್ದೆಗೇರಲಿರುವ ಎರಡನೇ ಮಹಿಳೆ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಕಳೆದ ಆರು ವರ್ಷಗಳಿಂದ
ಗೃಹಸಚಿವೆಯಾಗಿದ್ದ ಇವರು, ಸೋಮವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದರು.

ಬುಧವಾರ ಸಂಜೆ ವೇಳೆಗೆ ನೂತನ ಪ್ರಧಾನಿಗೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಹಾಲಿ ಪ್ರಧಾನಿ ಡೇವಿಡ್ ಕೆಮರೂನ್ ಪ್ರಕಟಿಸಿದ್ದಾರೆ. ಪ್ರಧಾನಿ ಹುದ್ದೆ ರೇಸ್​ನಲ್ಲಿದ್ದ 52 ವರ್ಷದ ಇಂಧನ ಸಚಿವೆ ಲೀಡ್ಸೊಮ್ ಸೋಮವಾರ ಏಕಾಏಕಿ ತನ್ನ ನಿರ್ಧಾರ ಬದಲಿಸಿ, ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯುವು ದಕ್ಕೆ ಬೆಂಬಲ ನೀಡುವುದಾಗಿ ಪ್ರಕಟಿಸಿದರು. ಅಂತಿಮವಾಗಿ ತೆರೇಸಾ ಮಾತ್ರ ಕಣದಲ್ಲಿ ಉಳಿದಿದ್ದರು. ಬ್ರೆಕ್ಸಿಟ್ ಪರ ಅಭಿಯಾನ ನಡೆಸಿದ್ದ ಬೋರಿಸ್ ಜಾನ್ಸನ್ ಹಾಗೂ ಮೈಕೆಲ್ ಗೋವ್ ಅವರು ತೆರೇಸಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಮಂಗಳವಾರದ ಬೆಳಗ್ಗೆ ಹೊತ್ತಿಗೆ ತೆರೇಸಾರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು.

ಗೊಂದಲದ ನಿಲುವು: ಜನಮತಗಣನೆ ವೇಳೆ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕೆಂದು ವ್ಯಾಪಕ ಪ್ರಚಾರ ನಡೆಸಿದ ತೆರೇಸಾ, ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ತನ್ನ ನಿಲುವು ಬದಲಿಸಿದ್ದಾರೆ. ಜನಮತಗಣನೆಗೆ ಗೌರವ ನೀಡಿ, ಬ್ರೆಕ್ಸಿಟ್ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಐರೋಪ್ಯ ಒಕ್ಕೂಟದ ಒಪ್ಪಂದದಂತೆ ನಡೆದುಕೊಂಡು ಹೊರಬರಲು ಕನಿಷ್ಠ 6 ವರ್ಷಗಳು ಬೇಕಾಗಬಹುದು. ಅಂದಾಜಿನ ಪ್ರಕಾರ 2022ರ ವೇಳೆಗೆ ಒಕ್ಕೂಟದಿಂದ ಪೂರ್ಣವಾಗಿ ಬ್ರಿಟನ್ ಹೊರನಡೆಯಬಹುದು ಎಂದು ವಿದೇಶಾಂಗ ಸಚಿವ ಫಿಲಿಫ್ ಹೆಮ್ಮಂಡ್ ಹೇಳಿದ್ದಾರೆ.

ಐರಲ್ ಲೇಡಿ 2.0: ಥ್ಯಾಚರ್ ಬಳಿಕ ಪ್ರಧಾನಿ ಹುದ್ದೆಗೇರುತ್ತಿರುವ ಎರಡನೇ ಮಹಿಳೆ ಎಂಬ ಕೀರ್ತಿಗೆ ತೆರೇಸಾ ಮೇ ಪಾತ್ರರಾಗಿದ್ದಾರೆ. ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿಯ ತೆರೇಸಾ, ವಿದೇಶಾಂಗ ಹಾಗೂ ಗೃಹ ಸಚಿವೆಯಾಗಿ ತೆಗೆದುಕೊಂಡ ಗಟ್ಟಿ ನಿಲುವುಗಳು ಪ್ರಶಂಸೆಗೆ ಪಾತ್ರವಾಗಿದ್ದು, ಪ್ರಧಾನಿ ಹುದ್ದೆಯ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ವಲಸೆ, ಡ್ರಗ್ಸ್ ನೀತಿ, ಕೌಟುಂಬಿಕ ವಲಸೆ ಮತ್ತಿತರ ನೀತಿನಿಲುವುಗಳು ಮತ್ತು ಮೂಲಭೂತ ವಾದಿ ಅಬು ಕಟಾಡಾನನ್ನು ದೇಶದಿಂದ ಹೊರಗಟ್ಟುವ ದೃಢ ನಿರ್ಧಾರ ಮುಂತಾದ ಅವರ ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ. ಮಹಿಳಾ ಹಾಗೂ ಸಮಾನತೆ ಸಚಿವೆಯಾಗಿದ್ದ ವೇಳೆ ಸಲಿಂಗಿಗಳ ಮದುವೆ ಬೆಂಬಲಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೂ ಇಟ್ಟ ಹೆಜ್ಜೆಯಿಂದ ಹಿಂದೆಸರಿಯದೆ ತನ್ನ ನಿಲುವಿಗೆ ಅಂಟಿಕೊಂಡಿದ್ದರಿಂದ ಐರನ್ ಲೇಡಿ ಎಂದು ಖ್ಯಾತಿ ಪಡೆದಿದ್ದಾರೆ.

ಬ್ರೆಕ್ಸಿಟ್ ತಂದ ಬಿಕ್ಕಟ್ಟು: ಚಾರಿತ್ರಿಕ ಬ್ರೆಕ್ಸಿಟ್ ಜನಮತಗಣನೆ ಯಲ್ಲಿ ಬ್ರಿಟನ್ ಜನತೆ ಐರೋಪ್ಯ ಒಕ್ಕೂಟದಿಂದ ಹೊರ ನಡೆಯುವ ತೀರ್ವನ ಪ್ರಕಟಿಸಿದ್ದರು. ಒಕ್ಕೂಟದಲ್ಲಿ ಉಳಿಯಬೇಕೆಂಬ ನಿಲುವು ಹೊಂದಿದ್ದ ಹಾಲಿ ಪ್ರಧಾನಿ ಡೇವಿಡ್ ಕೆಮರೂನ್ ನಿರ್ಧಾರಕ್ಕೆ ದೇಶದ ಜನತೆ ವಿರುದ್ಧವಾಗಿ ಮತ ಚಲಾಯಿಸಿದ್ದರು. ಸೆಪ್ಟೆಂಬರ್​ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಕೆಮರೂನ್ ಘೊಷಿಸಿದ್ದರು. ಈಗ ಪ್ರಧಾನಿ ಅಭ್ಯರ್ಥಿ ಆಯ್ಕೆಯಾದ ಹಿನ್ನೆಲೆಯಲ್ಲಿ ಎರಡು ತಿಂಗಳ ಮುಂಚೆಯೇ ರಾಜೀನಾಮೆ ಸಲ್ಲಿಸುತ್ತಿದ್ದಾರೆ.


No comments:

Post a Comment